Watch Video | ಏಕಾಏಕಿ ತೆರೆದುಕೊಂಡಿತ್ತು ಮೇಲಕ್ಕೆ ಹಾರುತ್ತಿದ್ದ ವಿಮಾನದ ಬಾಗಿಲು…! ಅದರಲ್ಲಿದ್ದ 25 ಮಂದಿ ಪಾರಾಗಿದ್ದೆ ಪವಾಡಸದೃಶ್ಯ

ವಿಮಾನ ಪ್ರಯಾಣ ಬಹಳ ತ್ವರಿತ ಎನಿಸಿದ್ರೂ ಒಮ್ಮೊಮ್ಮೆ ಬಹಳ ಅಪಾಯಕಾರಿಯೂ ಆಗಿರುತ್ತದೆ. ಪ್ರಯಾಣಿಕರೆಲ್ಲ ಕುಳಿತ ಬಳಿಕ ವಿಮಾನ ಟೇಕಾಫ್ ಆದ ಮೇಲೆ ಇದ್ದಕ್ಕಿದ್ದಂತೆ ವಿಮಾನದ ಬಾಗಿಲು ತೆರೆದರೆ ಏನಾಗಬಹುದು ಅನ್ನೋದನ್ನು ಊಹಿಸೋದು ಕೂಡ ಕಷ್ಟ.
ರಷ್ಯಾದಲ್ಲಿ ಇಂಥದ್ದೇ ಘಟನೆ ನಡೆದಿದ್ದು, ವಿಡಿಯೋ ಕೂಡ ಇಂಟರ್ನೆಟ್ನಲ್ಲಿ ಹರಿದಾಡ್ತಿದೆ. ಈ ವಿಮಾನ ಜನವರಿ 9 ರಂದು ರಷ್ಯಾದ ಸೈಬೀರಿಯನ್ ಪ್ರದೇಶದಲ್ಲಿರುವ ಮಗನ್ ಎಂಬ ಸ್ಥಳದಿಂದ ಟೇಕ್ ಆಫ್ ಆಗಿತ್ತು.
ಈ ವಿಮಾನವು ಮಗದನ್ಗೆ ಹೋಗಬೇಕಿತ್ತು. ಮಾಹಿತಿ ಪ್ರಕಾರ ವಿಮಾನದಲ್ಲಿ 25 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ಈ ವಿಮಾನ ಟೇಕಾಫ್ ಆಗುವಾಗ ಅಲ್ಲಿ ತುಂಬಾ ಚಳಿಯೂ ಇತ್ತು. ಈ ವಿಮಾನವು ಮೇಲಕ್ಕೆ ಹೋಗಿ ಮಗದನ್ ಕಡೆಗೆ ಹಾರಿದ ತಕ್ಷಣ ಅದರ ಬಾಗಿಲು ಇದ್ದಕ್ಕಿದ್ದಂತೆ ತೆರೆದುಕೊಂಡಿದೆ. ವಿಮಾನದ ಈ ಬಾಗಿಲನ್ನು ಸರಕುಗಳನ್ನು ಲೋಡ್ ಮಾಡಲು ಮತ್ತು ಇಳಿಸಲು ಬಳಸಲಾಗುತ್ತದೆ. ಈ ಬಾಗಿಲು ತೆರೆದ ತಕ್ಷಣ ಭಾರೀ ಗಾಳಿಯಿಂದಾಗಿ ವಿಮಾನದ ಒಳಗಿನ ಪರದೆಗಳು ಹಾರಲು ಪ್ರಾರಂಭಿಸಿದವು.
ಇದರಿಂದಾಗಿ ವಿಮಾನದೊಳಗಿನ ತಾಪಮಾನ ಗಣನೀಯವಾಗಿ ಕುಸಿದಿದೆ. ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಈ ಘಟನೆಯ ವಿಡಿಯೋವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಬಾಗಿಲು ಓಪನ್ ಆಗಿದ್ದರಿಂದ ಪ್ರಯಾಣಿಕರು ಭಯದಿಂದ ಕೂಗಿಕೊಂಡಿದ್ದಾರೆ. ನಂತರ ಪೈಲಟ್ ವಿಮಾನವನ್ನು ಕೆಳಕ್ಕಿಳಿಸಿದ್ದಾರೆ. ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಯಾವುದೇ ಅಪಾಯವಾಗಿಲ್ಲ, ಎಲ್ಲರೂ ಸೇಫ್ ಆಗಿದ್ದಾರೆ.