BIG NEWS: ಅಕ್ರಮವಾಗಿ ಶಾರುಖ್ ಬಂಗಲೆ ಪ್ರವೇಶ; ಇಬ್ಬರು ಯುವಕರು ಅರೆಸ್ಟ್

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಮುಂಬೈನಲ್ಲಿರುವ ‘ಮನ್ನತ್’ ನಿವಾಸಕ್ಕೆ ಇಬ್ಬರು ಯುವಕರು ಅಕ್ರಮವಾಗಿ ಪ್ರವೇಶಿಸಿದ್ದು, ಬಳಿಕ ಅವರನ್ನು ಹಿಡಿದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಗುರುವಾರ ಬೆಳಗಿನ ಜಾವ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕಾಂಪೌಂಡ್ ಗೋಡೆ ಏರಿ 19-20 ವಯೋಮಾನದೊಳಗಿನ ಗುಜರಾತ್ ಮೂಲದ ಈ ಇಬ್ಬರು ಯುವಕರು ಒಳ ಪ್ರವೇಶಿಸಿದ್ದಾರೆ. ಆದರೆ ತಕ್ಷಣವೇ ಇವರನ್ನು ಹಿಡಿದ ಭದ್ರತಾ ಸಿಬ್ಬಂದಿ ಪೊಲೀಸರ ವಶಕ್ಕೆ ನೀಡಿದ್ದಾರೆ.
ವಿಚಾರಣೆ ವೇಳೆ ಈ ಇಬ್ಬರು ಯುವಕರು ತಾವು ಶಾರುಖ್ ಖಾನ್ ಅಭಿಮಾನಿಗಳಾಗಿದ್ದು, ಅವರನ್ನು ನೋಡುವ ಸಲುವಾಗಿಯೇ ಗುಜರಾತಿನಿಂದ ಮುಂಬೈಗೆ ಬಂದಿದ್ದೆವು ಎಂದಿದ್ದಾರೆ. ಆದರೆ ಇತರೆ ಕೋನಗಳಿಂದಲೂ ಪರಿಶೀಲಿಸುತ್ತಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
200 ಕೋಟಿ ರೂಪಾಯಿ ಬೆಲೆಬಾಳುವ ಶಾರುಖ್ ಅವರ ‘ಮನ್ನತ್’ ನಿವಾಸ, ವಾಣಿಜ್ಯ ನಗರಿ ಮುಂಬೈನ ಬಾಂದ್ರಾ ಬ್ಯಾಂಡ್ ಸ್ಟ್ಯಾಂಡ್ ಬಳಿ ಇದ್ದು, ಕೆಲವೊಮ್ಮೆ ಶಾರುಖ್ ತಮ್ಮ ಬಂಗಲೆಯಿಂದ ಹೊರಬಂದು ಅಭಿಮಾನಿಗಳಿಗೆ ದರ್ಶನ ನೀಡುತ್ತಾರೆ. ಆದರೆ ಈ ಇಬ್ಬರು ಯುವಕರು ಒಳ ಪ್ರವೇಶಿಸಲು ಏಕೆ ಯತ್ನಿಸಿದ್ದರು ಎಂಬುದು ತನಿಖೆ ಬಳಿಕ ತಿಳಿದು ಬರಲಿದೆ.