ಹೋಳಿ ಗಲಾಟೆ ನೋಡುತ್ತಿದ್ದವನಿಗೆ ಗುಂಡು ತಗುಲಿ ಸಾವು
ಭಾಗಲ್ಪುರ: ಬಿಹಾರದ ಭಾಗಲ್ಪುರದಲ್ಲಿ ಮಾರ್ಚ್ 8ರಂದು ಹೋಳಿ ಹಬ್ಬದ ಮುನ್ನಾ ದಿನದಂದು ನೌಗಾಚಿಯಾದಲ್ಲಿ ಹಬ್ಬದ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಉಂಟಾದ ಘರ್ಷಣೆಯಲ್ಲಿ ಗುಂಡಿಗೆ ಓರ್ವ ಬಲಿಯಾಗಿದ್ದಾನೆ. ಜಗಳ ಮಾಡುತ್ತಿದ್ದುದನ್ನು ನೋಡುತ್ತಿದ್ದ ವ್ಯಕ್ತಿಗೆ ಗುಂಡು ತಗುಲಿ ಆತ ಸಾವನ್ನಪ್ಪಿದ್ದರೆ, ಇನ್ನೋರ್ವನಿಗೆ ಗಂಭೀರ ಗಾಯಗಳಾಗಿವೆ.
ಮೃತ ಯುವಕನನ್ನು ಪ್ರದೀಪ್ ಪಂಡಿತ್ ಅವರ ಪುತ್ರ ಆಶಿಶ್ ರಾಜ್ ಎಂದು ಗುರುತಿಸಲಾಗಿದೆ.
ನೌಗಾಚಿಯಾ ಮುನ್ಸಿಪಲ್ ಕೌನ್ಸಿಲ್‌ನ ರಾಜೇಂದ್ರ ಕಾಲೋನಿಯಲ್ಲಿ ಈ ಘಟನೆ ಸಂಭವಿಸಿದೆ. ಅಧ್ಯಕ್ಷ ಪ್ರತಿನಿಧಿ ಪ್ರೇಮ್ ಸಾಗರ್ ಅಲಿಯಾಸ್ ಡಬ್ಲು ಯಾದವ್ ಮತ್ತು ವಾರ್ಡ್ ಕೌನ್ಸಿಲರ್ ಮನೀಶ್ ಕುಮಾರ್ ನಡುವೆ ಕೆಲವು ವಿಷಯಗಳಲ್ಲಿ ವಾಗ್ವಾದ ನಡೆಯಿತು. ಟೆರೇಸ್ ನಿಂದ ಈ ಗಲಾಟೆಯನ್ನು ಒಬ್ಬ ವಿಡಿಯೋ ಮಾಡುತ್ತಿದ್ದ. ಆಶೀಶ್ ಆತನ ಪಕ್ಕ ನಿಂತುಕೊಂಡಿದ್ದ.
ಗಲಾಟೆ ತಾರಕಕ್ಕೇರಿ ಗುಂಡು ಹಾರಿಸಲಾಗಿದೆ. ಆಗ ಮೇಲೆ ನಿಂತಿದ್ದ ಆಶೀಶ್ಗೆ ಗುಂಡು ತಗುಲಿ ಪ್ರಾಣ ಕಳೆದುಕೊಂಡಿದ್ದಾನೆ.