ಹೊಸ ರಾಷ್ಟ್ರೀಯ ಶಿಕ್ಷಣ ನೀತಿ: ಪದವಿ ಕೋರ್ಸ್ ಗಳ ಅವಧಿ ಕುರಿತು ಇಲ್ಲಿದೆ ಮಹತ್ವದ ಮಾಹಿತಿ
ಶಿವಮೊಗ್ಗ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿಯೇ ಪದವಿ ತರಗತಿಗಳು ಮೂರು ವರ್ಷ ಅವಧಿಯದ್ದಾಗಿದ್ದು, ನಾಲ್ಕು ವರ್ಷದ ಕೋರ್ಸ್ ಗಳು ಇಲ್ಲ ಎಂದು ಅನುದಾನ ರಹಿತ ಖಾಸಗಿ ಕಾಲೇಜುಗಳ ಪ್ರಾಂಶುಪಾಲರ ವೇದಿಕೆ ಸ್ಪಷ್ಟಪಡಿಸಿದೆ.
ಇಂದು ಕಟೀಲ್ ಅಪ್ಪು ಪೈ ಸ್ಮಾರಕ ಕಾಲೇಜಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೊಯ್ಸಳ ಕಾಲೇಜ್ ಪ್ರಾಂಶುಪಾಲ ವಿಲಿಯಂ ಡಿಸೋಜ ಅವರು, ಬಿಎ, ಬಿಎಸ್ಸಿ, ಬಿಕಾಂ, ಬಿಸಿಎ, ಬಿ.ಎಸ್.ಡಬ್ಲ್ಯೂ., ಬಿ.ಎಫ್.ಟಿ., ಈ ಪದವಿಗಳು ಮೂರು ವರ್ಷದ ಅವಧಿಯಲ್ಲೇ ನಡೆಯುತ್ತವೆ. ಕೆಲವರು ತಪ್ಪು ಕಲ್ಪನೆ ಮಾಡಿಕೊಂಡು ಇದು ನಾಲ್ಕು ವರ್ಷ ಎಂದು ತಿಳಿದುಕೊಂಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಬೇಡ. ಇವು ಮೂರು ವರ್ಷದ ಪದವಿಗಳಾಗಿವೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ತಪ್ಪು ಕಲ್ಪನೆಗಳನ್ನು ಹೊಂದಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು 2021 -22 ರ ಸಾಲಿನಲ್ಲಿಯೇ ಉನ್ನತ ಶಿಕ್ಷಣದಲ್ಲಿ ಅಳವಡಿಸಲಾಗಿದೆ. ಮೂರು ವರ್ಷ ಪದವಿ ಪಡೆದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಿಂದ ಸಂಬಂಧಿಸಿದ ಪದವಿ ಪ್ರಮಾಣ ಪತ್ರವನ್ನು ಈ ಹಿಂದಿನಂತೆಯೇ ಪಡೆಯುತ್ತಾರೆ. ಪದವಿ ಶಿಕ್ಷಣ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪಡೆಯಲು ಅಥವಾ ಉದ್ಯೋಗ ಪಡೆಯಲು ಮುಕ್ತ ಅವಕಾಶವಿರುತ್ತದೆ. ಕೆಲವರು ಗೊಂದಲದಿಂದ ಪದವಿಗೆ ದಾಖಲಾತಿಯನ್ನೇ ಮಾಡಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಈ ಬಗ್ಗೆ ಗೊಂದಲ ಬೇಡ ಎಂದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಬಿಎಸ್ಸಿ ಅಥವಾ ಬಿಎ ಪದವಿಯನ್ನು ಆಯ್ಕೆ ಮಾಡಿಕೊಂಡಾಗ ತನ್ನ ಇಚ್ಛೆಯ ಯಾವುದಾದರೂ ಎರಡು ವಿಷಯಗಳನ್ನು ಹಾಗೂ ಮುಕ್ತ ಆಯ್ಕೆಯ ಒಂದು ವಿಷಯವನ್ನು ಆಯ್ಕೆ ಮಾಡಲು ಅವಕಾಶವಿದೆ. ಇದರಿಂದ ವಿದ್ಯಾರ್ಥಿಗಳಿಗೆ ತನ್ನ ಇಚ್ಛೆಯ ವಿಷಯದಲ್ಲಿ ಆಳವಾದ ಅಧ್ಯಯನಕ್ಕೆ ಅವಕಾಶ ಸಿಗಲಿದೆ ಎಂದರು.
ಕುವೆಂಪು ವಿವಿ ಸಂಯೋಜನೆಗೆ ಒಳಪಟ್ಟ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಅನುದಾನರಹಿತ ಖಾಸಗಿ ಪದವಿ ಕಾಲೇಜುಗಳ ಪ್ರಾಂಶುಪಾಲರ ವೇದಿಕೆ ಈಗಾಗಲೇ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರನ್ನು ಭೇಟಿ ಮಾಡಿ ಗೊಂದಲದ ಬಗ್ಗೆ ತಿಳಿಸಿದೆ. ಅವರ ಮಾರ್ಗದರ್ಶನದ ಮೇರೆಗೆ ಉನ್ನತ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ವೇದಿಕೆ ಸದ್ಯದಲ್ಲಿಯೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಾಗಿ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಿಚಾರ ಸಂಕಿರಣ ಆಯೋಜಿಸಲಿದೆ ಎಂದರು.
ಡಾ. ಸಂಧ್ಯಾ ಕಾವೇರಿ ಮಾತನಾಡಿ, ಸರ್ಕಾರದ ಉನ್ನತ ಶಿಕ್ಷಣ ಇಲಾಖೆ 2022 -23 ನೇ ಸಾಲಿನ ಪದವಿ ತರಗತಿಗಳನ್ನು ಶೀಘ್ರದಲ್ಲಿಯೇ ಪ್ರಾರಂಭಿಸುವಂತೆ ಆದೇಶ ನೀಡಿದೆ. ಹಾಗಾಗಿ ಎಲ್ಲಾ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು ತಮ್ಮ ಇಚ್ಛೆಯ ಪದವಿಗಳಾದ ಬಿಎಸ್ಸಿ, ಬಿಎ, ಬಿಕಾಂ ಸೇರಿದಂತೆ ಇನ್ನಿತರ ಪದವಿಗಳಿಗೆ ದಾಖಲಾಗಬಹುದಾಗಿದೆ. ಆನ್ ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದ್ದು, ವಿವಿ ಸಂಯೋಜನೆಗೆ ಒಳಪಟ್ಟ ಎಲ್ಲಾ ಖಾಸಗಿ ಹಾಗೂ ಅನುದಾನರಹಿತ ಕಾಲೇಜ್ ಗಳಲ್ಲಿ ವಿದ್ಯಾರ್ಥಿಗಳಿಗೆ ದಾಖಲಾತಿ ಬಗ್ಗೆ ಮಾರ್ಗದರ್ಶನ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರೊ. ಶಂಕರನಾರಾಯಣ, ಡಾ. ಅರವಿಂದ್, ಡಾ, ರಾಜೇಂದ್ರ ಚೆನ್ನಿ, ಗಿರೀಶ್, ಪ್ರೊ. ದಿವಾಕರ್, ಪ್ರೊ. ರಾಮಚಂದ್ರ ಬಾಳಿಗ ಇದ್ದರು.