ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರೋ ಶ್ರೀಲಂಕಾದಲ್ಲಿ ಮತ್ತೊಂದು ಸಮಸ್ಯೆ, ವೇಶ್ಯಾವಾಟಿಕೆಯತ್ತ ಮುಖಮಾಡಿದ್ದಾರೆ ಮಹಿಳೆಯರು !
ಹಿಂದೆಂದೂ ಕಂಡು ಕೇಳರಿಯದಂತಹ ಆರ್ಥಿಕ ಬಿಕ್ಕಟ್ಟಿಗೆ ತುತ್ತಾಗಿರುವ ಶ್ರೀಲಂಕಾದಲ್ಲಿ ಮತ್ತೊಂದು ಹೊಸ ಸಮಸ್ಯೆ ಶುರುವಾಗಿದೆ. ಜವಳಿ ಉದ್ಯಮಗಳಲ್ಲಿ ಕೆಲಸ ಮಾಡ್ತಿದ್ದವರೆಲ್ಲ ಉದ್ಯೋಗ ಕಳೆದುಕೊಳ್ತಿದ್ದಾರೆ. ಪರಿಣಾಮ ಮಹಿಳೆಯರು ಅನಿವಾರ್ಯವಾಗಿ ಸೆಕ್ಸ್ ವರ್ಕರ್ಗಳಾಗಿ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಆರ್ಥಿಕ ಬಿಕ್ಕಟ್ಟಿನಿಂದಾಗಿ ಲಂಕಾದಲ್ಲಿ 22 ಮಿಲಿಯನ್ ಜನರು ಬಡತನ ಅನುಭವಿಸ್ತಿದ್ದಾರೆ. ಇಂಧನ, ಆಹಾರ, ಮತ್ತಿತರ ಅಗತ್ಯ ವಸ್ತುಗಳನ್ನು ಹೊಂದಿಸಲು ಜನರು ಪರದಾಡುವಂಥ ಸ್ಥಿತಿ ಇದೆ. ಪರಿಣಾಮ ಸಿಂಹಳೀಯರ ನಾಡಲ್ಲೀಗ ವೇಶ್ಯಾವಾಟಿಕೆ ಹೆಚ್ಚಾಗ್ತಿದೆ.
ಜೀವನ ನಿರ್ವಹಣೆಗಾಗಿ ಮಹಿಳೆಯರು ಲೈಂಗಿಕ ಕಾರ್ಯಕರ್ತೆಯರಾಗಿ ಬದಲಾಗ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಲಂಕಾದಲ್ಲಿ ವೇಶ್ಯಾವಾಟಿಕೆ ಶೇ.30ರಷ್ಟು ಹೆಚ್ಚಾಗಿದೆ. ಸ್ಪಾ ಹಾಗೂ ವೆಲ್ನೆಸ್ ಸೆಂಟರ್ಗಳಲ್ಲೂ ವೇಶ್ಯಾವಾಟಿಕೆ ನಡೆಯುತ್ತಿದೆ. ಜೀವನ ನಿರ್ವಹಣೆಗೆ ಈಗ ಉಳಿದಿರೋದು ಇದೊಂದೇ ಮಾರ್ಗ ಎನ್ನುತ್ತಿದ್ದಾರೆ ಸೆಕ್ಸ್ ವರ್ಕರ್ಗಳು.
ಕೊರೊನಾದಿಂದಾಗಿ ಜವಳಿ ಉದ್ಯಮ ನಷ್ಟದಲ್ಲಿತ್ತು. ಇದೀಗ ಆರ್ಥಿಕ ಸಂಕಷ್ಟ ಮತ್ತಷ್ಟು ಮಹಿಳೆಯರ ಕೆಲಸಕ್ಕೆ ಕುತ್ತು ತಂದಿದೆ. ಜವಳಿ ಕ್ಷೇತ್ರದಲ್ಲಿ ಕೆಲಸ ಕಳೆದುಕೊಂಡವರಲ್ಲಿ ಬಹುತೇಕರು ಸೆಕ್ಸ್ ವರ್ಕರ್ಗಳಾಗಿ ಬದಲಾಗಿದ್ದಾರೆ. ಕುಟುಂಬ ನಿರ್ವಹಣೆಗೆ ಇದನ್ನು ಬಿಟ್ಟರೆ ಬೇರೆ ಮಾರ್ಗವೇ ಇಲ್ಲದಂತಾಗಿದೆ ಎನ್ನುತ್ತಾರೆ ಅಲ್ಲಿನ ಮಹಿಳೆಯರು.