Thursday, August 11, 2022
Google search engine
HomeUncategorizedʼಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರನ ಕುಟುಂಬದ ಶಾಪ ಕೆ.ಎಸ್. ಈಶ್ವರಪ್ಪ ಅವರನ್ನು ತಟ್ಟದೇ ಬಿಡುವುದಿಲ್ಲʼ

ʼಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರನ ಕುಟುಂಬದ ಶಾಪ ಕೆ.ಎಸ್. ಈಶ್ವರಪ್ಪ ಅವರನ್ನು ತಟ್ಟದೇ ಬಿಡುವುದಿಲ್ಲʼ

ʼಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರನ ಕುಟುಂಬದ ಶಾಪ ಕೆ.ಎಸ್. ಈಶ್ವರಪ್ಪ ಅವರನ್ನು ತಟ್ಟದೇ ಬಿಡುವುದಿಲ್ಲʼ

ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರನ ಕುಟುಂಬದ ಶಾಪ ಕೆ.ಎಸ್. ಈಶ್ವರಪ್ಪ ಅವರನ್ನು ತಟ್ಟದೇ ಬಿಡುವುದಿಲ್ಲ. ಅದು ಈಶ್ವರಪ್ಪ ಕುಟುಂಬದವರನ್ನು ಕಾಡುತ್ತದೆ ಎಂದು ಕೆಪಿಸಿಸಿ ವಕ್ತಾರ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಅವರು ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಖುಲಾಸೆಯಾಗಿರುವುದು ಹಾಸ್ಯಾಸ್ಪದವಾಗಿದೆ. ಪೊಲೀಸರು ಒಮ್ಮೆಯೂ ಈಶ್ವರಪ್ಪ ಅವರನ್ನು ಕರೆಸಲಿಲ್ಲ. ತನಿಖೆಯನ್ನೂ ಮಾಡದೇ ಬಿ ರಿಪೋರ್ಟ್ ಹಾಕಿದ್ದಾರೆ.

ಮುಖ್ಯಮಂತ್ರಿ ಪದೇ ಪದೇ ಹೇಳುತ್ತಿದ್ದರು. ಈಶ್ವರಪ್ಪನವರು ಈ ಕೇಸ್ ನಿಂದ ಪಾರಾಗುತ್ತಾರೆ ಎಂದು. ಅವರ ಆಶೀರ್ವಾದದಂತೆ ಈಶ್ವರಪ್ಪನವರು ಬಚಾವಾಗಿದ್ದಾರೆ ನಿಜ. ಆದರೆ, ಅವರ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಈಶ್ವರಪ್ಪನವರಿಗೆ ಈ ಕಂಟಕ ತಪ್ಪಿದ್ದಲ್ಲ. ಅವರು ಹೈಕೋರ್ಟ್ ಮೊರೆ ಹೋಗುತ್ತಾರೆ ಎಂದರು.

ಶಿವಮೊಗ್ಗ ಜಿಲ್ಲೆ ಈಗ ಕೊಲೆಗಡುಕರ ಜಿಲ್ಲೆಯಾಗಿದೆ. ಹಾಡಹಗಲೇ ಪೊಲೀಸ್ ಠಾಣೆಗಳ ಮುಂದೆಯೇ ಕೊಲೆಯಾಗುತ್ತದೆ. ಇದಕ್ಕೆ ಶಾಸಕ ಈಶ್ವರಪ್ಪನವರೇ ನೇರ ಕಾರಣವಾಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸೋತಿದ್ದಾರೆ. ಪೊಲೀಸ್ ಠಾಣೆಗಳು ಕೂಡ ಬಿಜೆಪಿ ಕಚೇರಿಯಂತಾಗಿವೆ. ಕೊಲೆ ಗಾಂಜಾ, ಕಳ್ಳತನ, ದರೋಡೆ, ಮರಳು ಅಕ್ರಮ ದಂಧೆ ಮುಂತಾದ ಅಪರಾಧ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಪೊಲೀಸ್ ಇಲಾಖೆ ಜೊತೆಗೆ ಜಿಲ್ಲಾಡಳಿತವೂ ವಿಫಲವಾಗಿದೆ ಎಂದು ಆರೋಪಿಸಿದರು.

ಹರ್ಷ ಕೊಲೆಯಾದಾಗ ಈಶ್ವರಪ್ಪ ಅದನ್ನು ವಿಜೃಂಭಿಸಿ ವೋಟ್ ಬ್ಯಾಂಕ್ ಮಾಡಿಕೊಂಡರು. ಆದರೆ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ ಅವನೂ ಹಿಂದೂ ಎಂದು ಇವರಿಗೆ ಅರ್ಥವಾಗಲಿಲ್ಲವೇ? ಅವನೂ ಕೂಡ ಬಿಜೆಪಿ ಕಾರ್ಯಕರ್ತನೇ ಆಗಿದ್ದ. ಹೀಗಿದ್ದೂ ಭ್ರಷ್ಟಾಚಾರದ ಆರೋಪ ತಮ್ಮ ಮೇಲೆ ಬರುತ್ತದೆ ಎಂಬ ಕಾರಣಕ್ಕಾಗಿ ಈಶ್ವರಪ್ಪ ಅವರ ಕುಟುಂಬಕ್ಕೆ ಸಾಂತ್ವನವನ್ನೂ ಹೇಳಲಿಲ್ಲ ಎಂದರು.

ಈಶ್ವರಪ್ಪ ಕಾಂಗ್ರೆಸ್ ಮುಖಂಡರ ಮೇಲೆ ನಾಲಿಗೆಯನ್ನು ಹರಿಬಿಡುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಅವರಿಗಿಲ್ಲ. ಇದೇ ಈಶ್ವರಪ್ಪ ಅವರನ್ನು ಅವರ ಪಕ್ಷದವರೇ ಮುಗಿಸುವ ಕಾಲ ಹತ್ತಿರವಾಗುತ್ತಿದೆ. ಹರ್ಷನ ಸಹೋದರಿಯೇ ಈ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಯಾವ ಧರ್ಮದವರೂ ತಪ್ಪು ಮಾಡಿದರೂ ಅದು ತಪ್ಪೇ ಎಂದರು.

ಬಿಜೆಪಿಯನ್ನು ಕಟ್ಟಿ ಬೆಳೆಸಿದ ಭೀಷ್ಮನನ್ನು(ಬಿ.ಎಸ್.ವೈ.) ನಿವೃತ್ತಿಗೊಳಿಸುವ ಹುನ್ನಾರ ಅವರ ಪಕ್ಷದಿಂದಲೇ ಹುಟ್ಟಿದೆ. ಸಿ.ಟಿ. ರವಿ, ಸಂತೋಷ್, ಪ್ರಹ್ಲಾದ್ ಜೋಶಿ ಮುಂತಾದವರು ಸೇರಿಕೊಂಡು ಯಡಿಯೂರಪ್ಪನವರನ್ನು ಕಡೆಗಾಣಿಸಿದ್ದಾರೆ. ಪಾಪ ಅವರು ಕಣ್ಣೀರು ಹಾಕಿಕೊಂಡು ಮುಖ್ಯಮಂತ್ರಿ ಪದವಿ ತ್ಯಜಿಸಬೇಕಾಗಿ ಬಂತು. ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯಲ್ಲಿ ಒಂದಿಷ್ಟು ಅಭಿವೃದ್ಧಿಯಾದರೂ ಆಗಿತ್ತು. ಈ ಈಶ್ವರಪ್ಪ ಕೇಸರಿ ಶಾಲು ಹಾಕಿಕೊಂಡು ದೇವಸ್ಥಾನ ಸುತ್ತಿದ್ದು ಬಿಟ್ಟರೆ ಬೇರೆನೂ ಮಾಡಲಿಲ್ಲ. ಯಡಿಯೂರಪ್ಪನವರ ಶಾಪ ಕೂಡ ಈಶ್ವರಪ್ಪನವರ ಕುಟುಂಬವನ್ನು ತಟ್ಟುತ್ತದೆ ಎಂದರು.

ಕೇಂದ್ರ ಸರ್ಕಾರ ಜಿ.ಎಸ್.ಟಿ.ಯನ್ನು ಮಾಫಿಯಾ ಮಾಡಲು ಹೊರಟಿದೆ. 49 ಲಕ್ಷ ಕೋಟಿ ಸಾಲ ಮಾಡಿರುವ ಭಾರತ ಅದನ್ನು ತೀರಿಸಲು ಜಿ.ಎಸ್.ಟಿ. ಎಂಬ ತೆರಿಗೆಯನ್ನು ವಸೂಲಿ ಮಾಡಲು ಹೊರಟು ಬಡವರ ಬದುಕನ್ನೇ ಕಸಿದುಕೊಂಡಿದೆ. ಶಿವಮೊಗ್ಗ, ಸಾಗರ ಸೇರಿದಂತೆ ವಿವಿಧೆಡೆ ಭಾರೀ ಮಳೆಯಿಂದ ಮನೆಗಳು, ಪ್ರಾಣ ಹಾನಿಯಾದರೂ ಸರ್ಕಾರ ಯಾವ ನೆರವೂ ನೀಡಿಲ್ಲ. ಸಾಗರದ ಎಲ್.ಬಿ. ಕಾಲೇಜಿನಲ್ಲಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ಕೂಡ ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments